ಕನ್ನಡ ಲಿಪಿ ತಂತ್ರಾಂಶಗಳಿಗೆ ಚೌಕಟ್ಟು: ಏನು? ಏಕೆ?

ಕನ್ನಡ ಲಿಪಿ ತಂತ್ರಾಂಶಗಳಿಗೆ ಚೌಕಟ್ಟು: ಏನು? ಏಕೆ?

ಗಣಕಗಳಲ್ಲಿ ಕನ್ನಡ ಲಿಪಿಯನ್ನು ನೀಡಬಲ್ಲ ಹಲವಾರು ಲಿಪಿ ತಂತ್ರಾಂಶಗಳು (ಸಾಫ್ಟ್ವೇರ್) ಈಗಾಗಲೇ ಬಳಕೆಯಲ್ಲಿವೆ (ಆಕೃತಿ, ಶ್ರೀಲಿಪಿ, ಐಎಸ್ಎಂ, ವಿನ್ಕೀ, ಸುರಭಿ, ಕೈರಳಿ, ಬರಹ ಇತ್ಯಾದಿ). ಕನ್ನಡಕ್ಕೆ ಇವು ಸಲ್ಲಿಸುತ್ತಿರುವ ಸೇವೆ ಗಣನೀಯ.
 

 ಆದರೆ ಈ ಕನ್ನಡ ಲಿಪಿ ತಂತ್ರಾಂಶಗಳ ಬಳಕೆಯ ಹಾದಿಯಲ್ಲಿ ಯಾವ ಗೊಂದಲಗಳೂ ಇರಬಾರದು, ಬಳಕೆಯ ವಿಧಾನ ಸರಳವಾಗಿರಬೇಕು ಹಾಗೂ ಸುಲಭವಾಗಿರಬೇಕು.
 

 ಗಣಕೀಕರಣದ ಎಲ್ಲ ಆಯಾಮಗಳಲ್ಲೂ (ಆಡಳಿತ, ವಾಣಿಜ್ಯ, ಅಂತರಜಾಲ ಕ್ಷೇತ್ರ ಇತ್ಯಾದಿ) ಕನ್ನಡವು ವ್ಯಾಪಕವಾಗಿ ಬಳಕೆಯಾಗಬೇಕಾದರೆ ಇದು ಅತ್ಯಗತ್ಯ ಹಾಗೂ ಅನಿವಾರ್ಯ.
 

 ಆದರೆ ಗಣಕಗಳಲ್ಲಿ ಕನ್ನಡ ಲಿಪಿಯನ್ನು ನೀಡುತ್ತಿರುವ ಈ ಹಲವಾರು ಲಿಪಿ ತಂತ್ರಾಂಶಗಳ ನಡುವೆ ಯಾವುದೇ ಹೊಂದಾಣಿಕೆ, ಸಾಮರಸ್ಯ, ಏಕರೂಪತೆ ಮುಂತಾದ ಲಕ್ಷಣಗಳಿಲ್ಲ.

ಈ ಕಾರಣಗಳಿಂದ ಈ ವಿವಿಧ ತಂತ್ರಾಂಶಗಳ ನಡುವೆ ಮಾಹಿತಿ ವಿನಿಮಯ ಅಸಾಧ್ಯವಾಗಿ ಪರಿಣಮಿಸಿದೆ; ಅಂದರೆ ಒಂದು ಲಿಪಿ ತಂತ್ರಾಂಶವನ್ನು ಬಳಸಿ ಸಿದ್ಧಪಡಿಸಿದ ಮಾಹಿತಿಗಳನ್ನು ಇನ್ನೊಂದು ತಂತ್ರಾಂಶದ ಮೂಲಕ ಬಳಸಲಾಗುತ್ತಿಲ್ಲ. ಆದ್ದರಿಂದ ಬಳಕೆದಾರರು ಗಣಕಗಳಲ್ಲಿ ಒಮ್ಮೆ ಕೀಲಿಸಿದ ಮಾಹಿತಿಗಳನ್ನು ಮತ್ತೆ ಮತ್ತೆ ಕೀಲಿಸಬೇಕಾದ ಅಸಹನೀಯ ಪರಿಸ್ಥಿತಿ ಉಂಟಾಗಿದೆ. ಇದರಿಂದ ಕಾಲವ್ಯಯ, ಧನವ್ಯಯ ಹಾಗೂ ಮಾನವ ಸಂಪನ್ಮೂಲ ವ್ಯಯ; ಗಣಕಗಳಲ್ಲಿ ಕನ್ನಡದ ಬಳಕೆಯು ಗೊಂದಲದ ಗೂಡು; ಕನ್ನಡಕ್ಕೆ ಮಾರಕ.
 

ಈಗಿರುವ ಪರಿಸ್ಥಿತಿಯೇ ಮುಂದುವರೆದರೆ ಗಣಕಗಳಲ್ಲಿ ಕನ್ನಡದ ಬಳಕೆ ಕೇವಲ ಮುದ್ರಣಕ್ಷೇತ್ರಕ್ಕೆ ಮಾತ್ರ ಸೀಮಿತ ಗೊಳ್ಳುತ್ತದೆ. ಅಲ್ಲೂ ಹತ್ತಾರು ಎಡರು ತೊಡರುಗಳು ಉಂಟಾಗುತ್ತಲೇ ಇರುತ್ತವೆ. ಇದು ಎಲ್ಲರ ಈವರೆಗಿನ ಅನುಭವ.
 

ಇಂತಹ ಪರಿಸ್ಥಿತಿ ಅನಿವಾರ್ಯವೇ? ಖಂಡಿತಾ ಇಲ್ಲ. 1993 ರಷ್ಟು ಹಿಂದೆಯೇ ಈ ಸಮಸ್ಯೆಗಳನ್ನು ಅಧ್ಯಯನ ಮಾಡಲಾಯಿತು. ಮುಖ್ಯವಾಗಿ,
 

1. ಕನ್ನಡ ಲಿಪಿ ತಂತ್ರಾಂಶಗಳ ನಡುವೆ ಮಾಹಿತಿ ವಿನಿಮಯದ ಅಗತ್ಯವನ್ನು ಮನಗಾಣಲಾಯಿತು ಮತ್ತು

2. ಗಣಕದ ಕೀಲಿಮಣೆಯ ಕೀಲಿಗಳಿಗೆ ಕನ್ನಡದ ವರ್ಣಮಾಲೆಯ ಅಕ್ಷರಗಳನ್ನು ಗೊತ್ತುಪಡಿಸುವಲ್ಲಿ ಏಕರೂಪತೆ ಇಲ್ಲದಿರುವುದರಿಂದ ಉಂಟಾಗಿರುವ ಗೊಂದಲಗಳನ್ನು ಗಮನಿಸಲಾಯಿತು; ಇಂಗ್ಲಿಷ್ ಅಕ್ಷರಗಳು ಮತ್ತು ಗಣಕದ ಕೀಲಿಮಣೆಯ ಕೀಲಿಗಳ ನಡುವೆ ಏಕರೂಪ ವಿನ್ಯಾಸ ಇರುವಂತೆ ಕನ್ನಡಕ್ಕೂ ಒಂದು ನಿರ್ದಿಷ್ಟ ವಿನ್ಯಾಸವಿರಬೇಕಾದ ಅಗತ್ಯತೆಯನ್ನು ಕಂಡುಕೊಳ್ಳಲಾಯಿತು.
 

ಈ ಶಿಸ್ತುಗಳಿಗೆ ಬದ್ಧವಾಗಿರಲು

ಕನ್ನಡ ಲಿಪಿ ತಂತ್ರಾಂಶಗಳು ಬಳಸುವ ಕನ್ನಡ ಅಕ್ಷರಭಾಗಗಳು ಮತ್ತು ಈ ಅಕ್ಷರಭಾಗಗಳನ್ನು ಗಣಕಗಳಲ್ಲಿ ಆಂತರಿಕ ವಾಗಿ ಪ್ರತಿನಿಧಿಸಲು ಬಳಸುವ ಆಸ್ಕಿ (ಆಸ್ಕಿ) ಸಂಕೇತಗಳು ಸಾಮಾನ್ಯವಾಗಿರಬೇಕು.
 

ಕನ್ನಡಭಾಷೆಯ ವೈಶಿಷ್ಟ್ಯವಾದ ಧ್ವನ್ಯಾತ್ಮಕತೆಯನ್ನು ಬಳಸಿಕೊಂಡು ಗಣಕದ ಕೀಲಿಮಣೆಯ ಕೀಲಿಗಳ ಸಂಖ್ಯೆಯನ್ನು ಕನಿಷ್ಠಗೊಳಿಸಬೇಕು. ಈ ಕೀಲಿಮಣೆ ವಿನ್ಯಾಸ ಸಾರ್ವತ್ರಿಕವಾಗಬೇಕು.
 

ಈ ರೀತಿಯ ಶಿಷ್ಟತೆ ಮತ್ತು ಏಕರೂಪತೆಗಳನ್ನು ನಿರ್ಧರಿಸುವವರೇ ಇಲ್ಲದೆ ಕನ್ನಡವೇ ಏಕೆ ಎಲ್ಲ ಭಾರತೀಯ ಭಾಷೆಗಳೂ ಮೇಲಿನ ಸಮಸ್ಯೆಗಳನ್ನು ಎದುರಿಸುತ್ತಿವೆ. ಲಿಪಿ ತಂತ್ರಾಂಶ ತಯಾರಕರನ್ನಂತೂ ಈ ಬಗ್ಗೆ ದೂರುವಂತಿಲ್ಲ. ಶಿಷ್ಟತೆ ನಿರೂಪಿತ ವಾಗದಿದ್ದಾಗ ಪ್ರತಿಯೊಬ್ಬ ತಂತ್ರಾಂಶ ತಯಾರಕರೂ ತಮಗೆ ಸೂಕ್ತವೆನಿಸಿದ ದಾರಿ ಕಂಡುಕೊಂಡರು. ಹೀಗೆ ಕನ್ನಡ, ಕನ್ನಡಿಗರಿಗೆ ಗೊಂದಲ ಉಂಟಾಗುತ್ತಿರುವ ಈ ಪ್ರವೃತ್ತಿಯನ್ನು ತಪ್ಪಿಸಿ, ಲಿಪಿ ತಂತ್ರಾಂಶಗಳು ಅನುಸರಿಸಬೇಕಾದ ನಿಯಮಗಳನ್ನು ರೂಪಿಸಿ ಅವುಗಳನ್ನು ಪಾಲಿಸುವಂತೆ ಲಿಪಿ ತಂತ್ರಾಂಶ ತಯಾರಕರಿಗೆ ಅಧಿಕಾರವಾಣಿಯಿಂದ ಹೇಳಬೇಕಾದವರು ಸರ್ಕಾರದ ವರೇ ಹೊರತು ಬೇರೆಯವರಲ್ಲ.
 

ಈ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಿದ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ಮಾಹಿತಿ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿಯವರು ಮತ್ತು ಮಾಹಿತಿ ತಂತ್ರಜ್ಞಾನ ನಿರ್ದೇಶನಾಲಯದ ನಿರ್ದೇಶಕರು ಕನ್ನಡ ತಂತ್ರಾಂಶಗಳಿಗೆ ಶಿಷ್ಟತೆ ಮತ್ತು ಏಕರೂಪತೆಗಳು ಇರಲೇಬೇಕೆಂದು ತೀರ್ಮಾನಿಸಿ ಈ ಕುರಿತು ಗಟ್ಟಿಯಾದ ನಿರ್ಧಾರಗಳನ್ನು ಕೈಗೊಂಡಿದ್ದಾರೆ.
 

1996ರಷ್ಟು ಹಿಂದಿನಿಂದಲೇ ಸರ್ಕಾರದ ವಿವಿಧ ಹಂತಗಳಲ್ಲಿನ ಅಧಿಕಾರಿಗಳೊಡನೆ ಹಲವಾರು ಗಣಕ ಪರಿಣತರು ನಡೆಸಿದ ವಿಚಾರ ವಿನಿಮಯಗಳ ಪರಿಣಾಮವಾಗಿ, ಗಣಕದ ಕೀಲಿಮಣೆಯಲ್ಲಿ ಇಂಗ್ಲಿಷ್ ಅಕ್ಷರಗಳನ್ನು ಗುರುತಿಸಿರುವ 26 ಕೀಲಿಗಳಿಂದಲೇ ಕನ್ನಡದ ಎಲ್ಲ ಗುಣಿತಾಕ್ಷರಗಳು ಮತ್ತು ಸಂಯುಕ್ತಾಕ್ಷರಗಳನ್ನು ಪಡೆಯುವ ಅತ್ಯಂತ ತರ್ಕಬದ್ಧವಾದ, ವ್ಯಾವಹಾರಿಕವಾದ ಹಾಗೂ ಬಳಕೆದಾರರಿಗೆ ಸುಲಭವಾದ ಕೀಲಿಮಣೆ ವಿನ್ಯಾಸವನ್ನು ಕರ್ನಾಟಕ ಸರ್ಕಾರ ನಿಗದಿಪಡಿಸಿತು.
 

 ಹೀಗೆ 1998ರಲ್ಲಿ ನಿಗದಿಗೊಳಿಸಿರುವ ಕೀಲಿಮಣೆ ವಿನ್ಯಾಸಕ್ಕೆ ಸಂಬಂಧಿಸಿದಂತೆ
 

ಕನ್ನಡದ ಪದಗಳಲ್ಲಿ ಸಾಮಾನ್ಯವಾಗಿ ವ್ಯಂಜನದ ನಂತರ ಸ್ವರವು ಬಂದಾಗ ಎರಡೂ ಸೇರಿ ಗುಣಿತಾಕ್ಷರವಾಗುವ ಗುಣದ ಕಾರಣದಿಂದ ಕೀಲಿಮಣೆಯ ಮೇಲೆ ಸ್ವರ ಚಿಹ್ನೆಗಳ ಅಗತ್ಯವಿಲ್ಲ.
 

ಸಂಯುಕ್ತಾಕ್ಷರಗಳಲ್ಲಿನ ವ್ಯಂಜನಗಳು ಹಾಗೂ ಸ್ವರಗಳು ನಿಶ್ಚಿತ ಅನುಕ್ರಮಣಿಕೆಯಲ್ಲಿರುವ ತರ್ಕವನ್ನು ಬಳಸಲಾಗಿದೆ ಮತ್ತು
 

ಯಾವುದೇ ಸಂದರ್ಭದಲ್ಲಿ ಯಾವುದೇ ಊರು, ರಾಜ್ಯ ಅಥವಾ ದೇಶದಲ್ಲಿ ಯಾವುದೇ ಗಣಕದಲ್ಲಿ ಕನ್ನಡವನ್ನು ಬಳಸುವ ಅಗತ್ಯ ಹಾಗೂ ಅವಕಾಶಗಳಿರುವುದರಿಂದ ಯಾವ ಕೀಲಿಗೆ ಯಾವ ಅಕ್ಷರ ಎಂಬುದನ್ನು ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತದೆ.
 

ಮುಂದುವರೆದು 2000 ನೇ ಇಸವಿ ಮಾರ್ಚ್ನಲ್ಲಿ ಕರ್ನಾಟಕ ಸರ್ಕಾರವು ರಚಿಸಿದ ಉನ್ನತ ತಾಂತ್ರಿಕ ಸಮಿತಿಯು ಏಕಭಾಷಾತ್ಮಕ ಕನ್ನಡ ಲಿಪಿ ಮೂಡಿಕೆಗೆ ಕನ್ನಡ ತಂತ್ರಾಂಶಗಳು ಬಳಸಬೇಕಾದ ಅಕ್ಷರಭಾಗಗಳನ್ನೂ, ಅವುಗಳಿಗೆ ಆಸ್ಕಿ ಸಂಕೇತಗಳನ್ನೂ ನಿಗದಿಪಡಿಸಿತು.
 

ಹೀಗೆ ಕನ್ನಡ ಲಿಪಿ ತಂತ್ರಾಂಶಗಳು ಅನುಸರಿಸಬೇಕಾದ ಶಿಷ್ಟತೆ ಮತ್ತು ಏಕರೂಪತೆಗಳನ್ನು ಕುರಿತು ಸಮಿತಿಯು ಸಿದ್ಧಪಡಿಸಿದ ವರದಿಯನ್ನು ಕರ್ನಾಟಕ ಸರ್ಕಾರವು ಅಂಗೀಕರಿಸಿ ಎಲ್ಲ ಲಿಪಿ ತಂತ್ರಾಂಶ ತಯಾರಕರೂ ತಮ್ಮ ತಂತ್ರಾಂಶ ಗಳಲ್ಲಿ ಈ ಅಂಶಗಳನ್ನು ಆಳವಡಿಸಬೇಕೆಂದು ಆದೇಶಿಸಿದೆ.
 

ಶಿಷ್ಟತೆ ಮತ್ತು ಏಕರೂಪತೆಗಳ ಪರೀಕ್ಷೆ - ಮಾನಕ ಲಿಪಿ ತಂತ್ರಾಂಶ:

ಇತರ ತಂತ್ರಾಂಶಗಳು ಸರ್ಕಾರವು ನಿಗದಿಪಡಿಸಿದ ಶಿಷ್ಟತೆಗಳಿಗೆ ಅನುಗುಣವಾಗಿವೆಯೇ ಎಂಬುದನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳುವುದು ಹೇಗೆ ಎಂಬುದು ಬಹುಮುಖ್ಯವಾದ ಸಮಸ್ಯೆ. ಗಣಕಗಳ ಆಂತರಿಕ ಸಂಕೇತ ವ್ಯವಸ್ಥೆಯು ಎಲ್ಲರಿಗೂ ತಿಳಿಯಲಂತೂ ಸಾಧ್ಯವಿಲ್ಲ. ಆದ್ದರಿಂದ ಸಾಮಾನ್ಯ ಬಳಕೆದಾರರೂ ಬಳಸಬಹುದಾದ ಸರಳ ಹಾಗೂ ಸುಲಭ ಪರೀಕ್ಷಾ ವಿಧಾನವೇನು?
 

ಈ ಸಂದಿಗ್ಧವನ್ನು ಪರಿಹರಿಸಲು ಕರ್ನಾಟಕ ಸರ್ಕಾರವು ಮತ್ತೊಂದು ಅಭೂತಪೂರ್ವ ತೀರ್ಮಾನವನ್ನು ತೆಗೆದುಕೊಂಡಿತು. ಅಂತೆಯೇ ತಾನು ನಿಗದಿಪಡಿಸಿರುವ ಶಿಷ್ಟತೆ ಮತ್ತು ಏಕರೂಪತೆಗಳನ್ನು ಅಳವಡಿಸಿಕೊಂಡ ತನ್ನದೇ ಆದ ಒಂದು ಮಾನಕ ಲಿಪಿತಂತ್ರಾಂಶವನ್ನು ಹೊಂದಿರಲು ನಿರ್ಧರಿಸಿತು. ಅಂತಹ ತಂತ್ರಾಂಶವನ್ನು ಅಭಿವೃದ್ದಿ ಪಡಿಸಲು ಕನ್ನಡ ಗಣಕ ಪರಿಷತ್ತಿಗೆ ತಿಳಿಸಿತು. ಇದಕ್ಕೆ ಸ್ಪಂದಿಸಿದ ಕನ್ನಡ ಗಣಕ ಪರಿಷತ್ತು `ನುಡಿ' ಎಂಬ ಹೆಸರಿನಲ್ಲಿ ಸರ್ಕಾರದ್ದೇ ಆದ ಒಂದು ಲಿಪಿ ತಂತ್ರಾಂಶವನ್ನು ಈಗಾಗಲೇ ಸಿದ್ಧಪಡಿಸಿದೆ. ಸರ್ಕಾರಿ ಇಲಾಖೆಗಳಲ್ಲಿ ಇದನ್ನು ಯಶಸ್ವಿಯಾಗಿ ಬಳಸಲಾಗುತ್ತಿದೆ.
 

ಶಿಷ್ಟತೆ ಮತ್ತು ಏಕರೂಪತೆಗಳ ಪರಿಣಾಮಗಳು

1. ಗಣಕಗಳಲ್ಲಿ ಕನ್ನಡದ ಬಳಕೆ ವ್ಯಾಪಕ.

2. ಸಹಸ್ರಾರು ಸಂಖ್ಯೆಗಳಲ್ಲಿ ಖಾಸಗಿ ಕನ್ನಡ ಆನ್ವಯಿಕ ತಂತ್ರಾಂಶಗಳ ಅಭಿವೃದ್ಧಿ ಮತ್ತು ಮಾರಾಟಕ್ಕೆ ಅವಕಾಶ.

3. ಖಾಸಗಿ ಕನ್ನಡ ತಂತ್ರಾಂಶ ತಯಾರಕರ ಸೃಜನಶೀಲತೆಗೆ ಹೆಚ್ಚಿನ ಚಾಲನೆ; ಹೊಸ ಪ್ರಯೋಗಗಳಿಗೆ ಅವಕಾಶ.

4 ದತ್ತ ಸಂಸ್ಕರಣೆ (ಡೇಟಾ ಪ್ರಾಸೆಸಿಂಗ್) ಅಂತರಜಾಲ ಮುಂತಾದ ಕ್ಷೇತ್ರಗಳಲ್ಲಿ ಆನ್ವಯಿಕ ತಂತ್ರಾಂಶಗಳ ತಯಾರಿಕೆಗೆ ವಿಪುಲ ಅವಕಾಶಗಳು.
 

(2001 ರಲ್ಲಿ ಬರೆದದ್ದು)